ದರ್ಶಪೂರ್ಣಮಾಸ -
ಪ್ರತಿ ಅಮಾವಾಸ್ಯೆ (ದರ್ಶ) ಮತ್ತು ಹುಣ್ಣಿಮೆಯಲ್ಲಿ (ಪೂರ್ಣಮಾಸ) ಗೃಹಸ್ಥಾಶ್ರಮಿಗಳಾದ ಬ್ರಾಹ್ಮಣರು ಸಪತ್ನೀಕರಾಗಿ ಮಾಡಬೇಕಾದ್ದೆಂದು ವಿಹಿತವಾಗಿರುವ ಒಂದು ಯಾಗ. ಇದು ಪಶುಯಾಗವಲ್ಲ. ಯಾವ ಧಾನ್ಯವನ್ನೋ ಅಕ್ಕಿಯನ್ನೋ ಹುರಿದು ಅರೆದು ಹಿಟ್ಟು ಮಾಡಿ ಅದರಿಂದ ಮಣ್ಣಿನ ಶ್ರಾವೆಗಳಲ್ಲಿ ವಿಶೇಷಾಕಾರದಲ್ಲಿ ತಟ್ಟಿ ಬೇಯಿಸಿದ ಪುರೋಡಾಶ ಎಂಬ ರೊಟ್ಟಿಯೇ ಈ ಯಾಗದಲ್ಲಿ ಪ್ರಧಾನವಾದ ಹೋಮದ್ರವ್ಯ. ಇದು ಪರೋಡಾಶ ಯಾಗಗಳಿಗೆ ಇಷ್ಟಿ ಎಂದು ಹೆಸರು.

ಅಮಾವಾಸ್ಯೆಯ ಹಿಂದಿನ (ಅನ್ವಾಧಾನ) ದಿನದಂದು ಪತ್ನೀಸಹಿತನಾಗಿ ಯಜಮಾನ ದೀಕ್ಷೆ ವಹಿಸಿ ವಿಧ್ಯುಕ್ತವಾದ ವ್ರತನಿಷ್ಠನಾಗಿ ಇಷ್ಟಿ ಮಾಡುವ ವಿಹಾರ ಭೂಮಿಯಲ್ಲಿ ಇಷ್ಟಿಗೆ ಅವಶ್ಯಕವಾದ ಪೂರ್ವಾಂಗಗಳ ಸಿದ್ಧತೆಯನ್ನು ಮಂತ್ರಪುರಸ್ಸರವಾಗಿ ಮಾಡಿಕೊಳ್ಳಬೇಕು. ಈ ಇಷ್ಟಿ ಗಾರ್ಹಪತ್ಯ, ಅಹವನೀಯ, ದಕ್ಷಿಣ ಎಂಬ ತ್ರೇತಾಗ್ನಿಯಲ್ಲಿ ಅನುಷ್ಟಿತವಾಗ ತಕ್ಕದ್ದು. ಅಮಾವಾಸ್ಯೆಯ ದಿನ ಉದಯಾತ್ ಪೂರ್ವವೇ ತಂತ್ರವನ್ನಾರಂಭಿಸಬೇಕು. ಬೆಳಗಿನ ಅಗ್ನಿಹೋತ್ರವಾದ ಮೇಲೆ ಒಂದೊಂದಕ್ಕೂ ವಿಹಿತವಾಗಿರುವ ಮಂತ್ರಗಳ ಉಚ್ಚಾರದೊಂದಿಗೆ ಬತ್ತ ಕುಟ್ಟಿ ಅಕ್ಕಿ ಮಾಡಿ ಅದನ್ನು ಹುರಿದು ಅರೆದು ಹಿಟ್ಟುಮಾಡಿ ಆ ಹಿಟ್ಟನ್ನು ಆಯಾ ಅಗ್ನಿಯಲ್ಲೇ ಕಾಯಿಸಿದ ನೀರಿನಿಂದ ನಿರ್ದಿಷ್ಟ ಸಂಖ್ಯೆಯ ಮಣ್ಣಿನ ಶ್ರಾವೆಗಳಲ್ಲಿ (ಕಪಾಲ) ಕಲಸಿ, ಅವುಗಳಲ್ಲೇ ಒಂದು ವಿಶೇಷವಾದ ಆಕಾರದಲ್ಲಿ ರೊಟ್ಟಿ ತಟ್ಟಿ, ಅವನ್ನು ಆಯಾ ಅಗ್ನಿಗಳಲ್ಲಿ ಆಯಾ ಶ್ರಾವೆಗಳಲ್ಲೇ ಬೇಯಿಸಿಟ್ಟುಕೊಂಡು ಹೋಮ ಕಾಲದಲ್ಲಿ ಹವಿಸ್ಸಾಗಿ ವಿನಿಯೋಗಿಸಬೇಕು. ದರ್ಶದಲ್ಲಿ ಅಗ್ನಿ ಮತ್ತು ಇಂದ್ರರಿಗೆ ಪುರೋಡಾಶವೇ ಹವಿಸ್ಸು; ಅಗ್ನಿಗೆ ಪುರೋಡಾಶ, ಇಂದ್ರನಿಗೆ ಪಯಸ್ (ಹಾಲು), ಮಹೇಂದ್ರನಿಗೆ ದಧಿ (ಮೊಸರು) ಎಂಬ ಸಂಪ್ರದಾಯವೂ ಉಂಟು. ಪೂರ್ಣಮಾಸದಲ್ಲಿ ಅಗ್ನಿಷೋಮರಿಗೆ (ಅಗ್ನಿ ಮತ್ತು ಸೋಮ) ಪುರೋಡಾಶವೇ ಹವಿಸ್ಸು. ದರ್ಶಕ್ಕಾಗಲಿ ಪೂರ್ಣಮಾಸಕ್ಕಾಗಲಿ ಯಾವ ಹವಿರ್ಭಾಗವೂ ಇಲ್ಲ. ಅಗ್ನಿ ಸೋಮರಿಗೆ ಆಜ್ಯಾಹುತಿಗಳನ್ನು ದರ್ಶದಲ್ಲಿ ವೃಧ್ ಯುಕ್ತವಾದ ಮಂತ್ರಗಳಿಂದಲೂ ಪೂರ್ಣ ಮಾಸದಲ್ಲಿ ಮಂತ್ರ ವೃತ್ರವಧಪರವಾದ ಮಂತ್ರಗಳಿಂದಲೂ ಪ್ರಧಾನ ಮಾಡಬೇಕು. ಈ ಹೋಮ ಸ್ವಿಷ್ಟಕೃತ್ ಹವಿಸ್ಸಿನೊಡನೆ ಮುಗಿಯುತ್ತದೆ. ಅನಂತರ ಹವಿಶ್ಯೇಷವನ್ನು ಯಜಮಾನ, ಬ್ರಹ್ಮ, ಪ್ರಾಶಿತ್ರ, ಅಗ್ನೀಧ್ರ ಮುಂತಾಗಿ ಎಲ್ಲರೂ ಪ್ರಾಶನ ಮಾಡುತ್ತಾರೆ. ಬಳಿಕ ದಕ್ಷಿಣೆ ಕೊಡಲಾಗುವುದು. ಪೂರ್ಣಮಾಸದಲ್ಲಿ ಅನ್ವಾಧಾನ ದಿನ ಏನೂ ಮಾಡಬೇಕಾಗಿರುವುದಿಲ್ಲ.

ಹೀಗೆ ಪ್ರಧಾನ ಹೋಮವಾದ ಮೇಲೆ-(ನ್ಯೂನಾತಿರಿಕ್ತ ಪ್ರಾಯಶ್ಚಿತ್ತರೂಪವಾದ) ಸರ್ವಪ್ರಾಯಶ್ಚಿತ್ತ, ಅನಾಜ್ಞಾತಾದ್ಯಾಹುತಿಗಳು, ಯಜ್ಞಭ್ರೇಷ ಪ್ರಾಯಶ್ಚಿತ್ತ-ಈ ಹೋಮಗಳನ್ನು ಮಾಡಿ ಪ್ರಣೀತಪಾತ್ರದಿಂದ ನೀರನ್ನು ವೇದಿಯ ಮೇಲೆ ಸುರಿದು ಆ ನೀರಿನಿಂದ ಉಕ್ತ ಮಂತ್ರೋಚ್ಚಾರಪೂರ್ವಕವಾಗಿ ಬಾಯನ್ನು ಒರಸಿಕೊಳ್ಳಬೇಕು. ಇದೇ ದರ್ಶಪೂರ್ಣಮಾಸದ ಅವಭೃಥ, ಅನಂತರ ವಿಹಿತ ರೀತಿಯಲ್ಲಿ ಪಾದವಿಕ್ಷೇಪದೊಡನೆ ವೇದಿ ಪರಿಕ್ರಮಣ ಮಾಡಿ ವಿಹಾರದಿಂದ ಹೊರಬಂದು ಎರಡು ಸಲ ಆಚಮನ ಮಾಡಬೇಕು. ಇದು ದರ್ಶಪೂರ್ಣಮಾಸೇಷ್ಟಿ ಪ್ರಯೋಗದ ಸ್ಥೂಲ ಪರಿಚಯ.

ದರ್ಶಪೂರ್ಣಮಾಸೇಷ್ಟಿ ನಿತ್ಯಕರ್ಮವಾದರೂ ಅದನ್ನೇ ಕಾಮ್ಯಕರ್ಮವನ್ನಾಗಿಯೂ ಅನುಷ್ಠಿಸಬಹುದು. ನಿತ್ಯಕರ್ಮವಾಗಿ ಮಾಡಿದರೆ ಯಥಾಶಕ್ತಿ ದಕ್ಷಿಣೆ, ಕಾಮ್ಯಕರ್ಮವಾದರೆ, ವಿಶೇಷವಾಗಿ ದಕ್ಷಿಣೆಯಲ್ಲದೆ ಅನ್ನ ಸಂತರ್ಪಣೆಯೂ ಆವಶ್ಯಕ. ಕಾಮ್ಯವಾಗಿ ಮಾಡಿದರೆ ಸ್ವರ್ಗಪ್ರಾಪ್ತಿಯೇ ಫಲ.

ದರ್ಶಪೂರ್ಣಮಾಸೇಷ್ಟಿ ತ್ರೇತಾಗ್ನಿಯಲ್ಲಿ ಮಾಡಬೇಕಾದ ಶ್ರೌತಕರ್ಮ. ಇದಲ್ಲದೆ ದರ್ಶಪೂರ್ಣಮಾಸ ಸ್ಥಾಲೀಷಾಕವೆಂಬ ಸ್ಮಾರ್ತಕರ್ಮವೂ ಒಂದಿದೆ. ಇದು ಔಪಾಸನಾಗ್ನಿಯಲ್ಲಿ ಅನುಷ್ಠಿತವಾಗತಕ್ಕ ನಿತ್ಯಕರ್ಮ. ಇದನ್ನೂ ಗೃಹಸ್ಥಾಶ್ರಮಿ ವಿವಾಹನಂತರ ತನ್ನ ಪತ್ನಿಯೊಡನೆ ಯಾವಜ್ಜೀವ ಮಾಡಬೇಕು.							(ಎಸ್.ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ